ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಸಂಪೂರ್ಣ ಪ್ರಸಂಗಗಾನದ ಅಪೂರ್ವ ಜ್ಞಾನಯಜ್ಞ ಕುಮಾರವಿಜಯ ಗಾನಾರ್ಚನೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಆಗಸ್ಟ್ 30 , 2015
ಆಗಸ್ಟ್ 30, 2015

ಸಂಪೂರ್ಣ ಪ್ರಸಂಗಗಾನದ ಅಪೂರ್ವ ಜ್ಞಾನಯಜ್ಞ ಕುಮಾರವಿಜಯ ಗಾನಾರ್ಚನೆ

ಪಾವಂಜೆ : ಯಕ್ಷಗಾನವನ್ನೇ ಆರಾಧನೆಯನ್ನಾಗಿಸಿ ಕೊಂಡಿರುವ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಾಲಯದ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಆಶ್ರಯದಲ್ಲಿ ಆಗಸ್ಟ್‌ 15ರಂದು ಕನ್ನಡದ ಮುಂಗೋಳಿ ಕವಿ ಮುದ್ದಣನ ಕೃತಿರತ್ನ ಕುಮಾರವಿಜಯ ಪ್ರಸಂಗದ ಪದ್ಯಗಳ ಗಾಯನದಿಂದ ಶರವಣ ದೇವನ ಆರಾಧನೆ ನಡೆಯಿತು. ಬೆಳಗ್ಗೆ 6ರಿಂದ ರಾತ್ರಿ 8ರ ತನಕ 22 ಮಂದಿ ಭಾಗವತರುಗಳಿಂದ ಸತತ 14 ತಾಸುಗಳಿಗೂ ಅಧಿಕ ಕಾಲ ನಡೆದ ಗಾನಾರ್ಚನೆ ಯಕ್ಷಗಾನ ಇತಿಹಾಸದಲ್ಲೊಂದು ದಾಖಲೆ. ಯಕ್ಷಗಾನ ಪ್ರಸಂಗಗಳ ಸಾಲಿನಲ್ಲೇ ಸೊಬಗಿನಷ್ಟೇ ಕಠಿನವೂ ಆದ ಸೊಗ-ಬಿಗುವಿನ ಶಬ್ದಚಮತ್ಕೃತಿಯ ಪ್ರಸಂಗ ಕುಮಾರವಿಜಯ.

ನಾದಾಹ್ಲಾದದೊಂದಿಗೆ ಪದಮೈತ್ರಿಯ ಅರ್ಥಸೌಂದರ್ಯದ ಸುಂದರ ಪದ್ಯ ಧಾಮಗಳ ಸಮುಚ್ಚಯ ಇದು. ಇದು ಆಡಲೂ ಕಷ್ಟ; ಆಡಿಸಲೂ ಕಷ್ಟ. ಈಗೀಗ ಸಂಪೂರ್ಣ ಪ್ರದರ್ಶನಗೊಳ್ಳದ ಐತಿಹಾಸಿಕ ಪ್ರಸಂಗವಿದು. ಆದರೆ ಕುಮಾರವಿಜಯದ ಪದ್ಯಗಳ ಮೂಲಕವೇ ಸುಬ್ರಹ್ಮಣ್ಯನ ಆರಾಧನೆ ನಡೆಯಬೇಕೆಂದು ನಿರ್ಧರಿಸಿ ಪಾವಂಜೆಯಲ್ಲಿ ಏರ್ಪಡಿಸಿದ ಗಾಯನೋತ್ಸವ ತೆಂಕುತಿಟ್ಟಿನ ಹಲವು ಭಾಗವತರನ್ನು ಒಂದೇ ವೇದಿಕೆಯಲ್ಲಿ ಒಂದು ದಿನ ಕುಳ್ಳಿರಿ ಸಿದೆ. ಒಂದು ತಲೆಮಾರಿನ ಭಾಗವತರ ಗಾಯನ ಶೈಲಿಯ ದಾಖಲಾತಿಯೂ ನಡೆದಿದೆ. ಛಂಧಸ್ಸರಸ್ವತಿ ಕುಣಿಯುವ ಕುಮಾರ ವಿಜಯದ ಸಮಗ್ರ ಪದ್ಯಗಳಿಗೆ ಇಲ್ಲಿ ಒಟ್ಟಾಗಿ ಧ್ವನಿ ಯಷ್ಟೇ ಅಲ್ಲ, ರಾಗದ ಸ್ಪರ್ಶವೂ ಸಿಕ್ಕಿದೆ. ಒಟ್ಟಂದದಲ್ಲಿ ಇದು ಶತಮಾನದ ಮಹಾಕಾವ್ಯಕ್ಕೆ ಸಲ್ಲಿಸಿದ ಬೃಹತ್‌ ಸರಸ್ವತೀಪೂಜೆ.

ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಮುಂಜಾನೆ 6 ಗಂಟೆಗೆ ದೇವಳದ ಧರ್ಮದರ್ಶಿ ಡಾ| ಯಾಜಿ ನಿರಂಜನ ಭಟ್‌ ಅವರು ಜಾಗಟೆ ಹಸ್ತಾಂತರಿಸಿ ದೀಪ ಬೆಳಗಿಸುವ ಮೂಲಕ ಆರಂಭ. ಪ್ರತಿ ತಂಡಕ್ಕೂ ತಲಾ ಎರಡು ತಾಸಿನಂತೆ ಏಳು ಸುತ್ತುಗಳನ್ನು ಮಾಡಿ ಪ್ರತಿಯೊಂದು ಸುತ್ತು ಮುಗಿಯುವಾಗಲೂ ಜ್ಞಾನಶಕ್ತಿ ಸುಬ್ರಹ್ಮಣ್ಯನನ್ನು ಪೂಜಿಸಿ, ಆರತಿಯನ್ನೆತ್ತಿ, ಸಭಿಕರಿಗೆ ಪ್ರಸಾದವನ್ನಿತ್ತು ಇಡೀ ಕಾರ್ಯಕ್ರಮವನ್ನು ನಿಜಾರ್ಥದಲ್ಲಿ ಶರವಣ ದೇವನ ಆರಾಧನೆ ಮಾಡಿರುವುದು ಪ್ರಾಮಾಣಿಕ ಕಳಕಳಿಯ ದ್ಯೋತಕ.

ಮುಂಜಾನೆಯ ಮೊದಲ ಹಂತದಲ್ಲಿ ಬಲಿಪ, ಪುತ್ತಿಗೆ, ಅಮ್ಮಣ್ಣಾಯರ ಗಾಯನಕ್ಕೆ ಪದ್ಯಾಣ, ಅಡೂರು ಅವರ ಹಿಮ್ಮೇಳ ಸಾಥ್‌. ಬಳಿಕದ ಎರಡನೇ ಸುತ್ತಿನಲ್ಲಿ ಪಟ್ಲ, ಕನ್ನಡಿಕಟ್ಟೆ, ಪುಣಿಂಚಿತ್ತಾಯರ ಗಾಯನಕ್ಕೆ ಉಪಾಧ್ಯಾಯ, ಚೈತನ್ಯರ ಹಿಮ್ಮೇಳ ಸಾಥ್‌. ಬಳಿಕ ಪೂರ್ವಾಹ್ನ 10ರಿಂದ ಪ್ರಫ‌ುಲ್ಲ, ಬೋಂದೆಲ್‌, ಬಲಿಪ ಪ್ರಸಾದರ ಗಾನಕ್ಕೆ ಕಡಬ ವಿನಯ, ಲಕ್ಷ್ಮೀನಾರಾಯಣ ಅಡೂರು ಹಿಮ್ಮೇಳ, 12ರಿಂದ 2ರ ತನಕ ಪದ್ಯಾಣ, ಕುರಿಯ, ಅಗರಿ, ಕುಬಣೂರು ಪದ್ಯಕ್ಕೆ ಪದ್ಯಾಣ, ಉಪಾಧ್ಯಾಯ ಹಿಮ್ಮೇಳ. ಅಪರಾಹ್ನ 2ರಿಂದ ತೆಂಕಬೈಲು, ಬೊಟ್ಟಿಕೆರೆ, ಪುತ್ತೂರು ರಮೇಶ ಭಟ್‌ ಗಾನಕ್ಕೆ ದೇಲಂತಮಜಲು, ಸೋಮಶೇಖರ ಭಟ್‌ ಕಾಶಿಪಟ್ನ ಹಿಮ್ಮೇಳ.

ಸಂಜೆ 4ರಿಂದ ಪುಂಡಿಕಾಯಿ ಗೋಪಾಲಕೃಷ್ಣ ಭಟ್‌, ಮಹೇಶ ಕನ್ಯಾಡಿ, ಭವ್ಯಶ್ರೀ ಮಂಡೆಕೋಲು ಗಾನಕ್ಕೆ ಮುರಾರಿ ಕಡಂಬಳಿತ್ತಾಯ, ಶ್ರೀಶರಾವ್‌ ನಿಡ್ಲೆ ಹಿಮ್ಮೇಳ. ಕೊನೆಯ ಸುತ್ತಿನಲ್ಲಿ ಬಲಿಪ ಶಿವಶಂಕರ ಭಟ್‌, ನಿಡುವಜೆ, ತೆಂಕಬೈಲು ಮುರಲಿ ಪದ್ಯಕ್ಕೆ ಚಂದ್ರಶೇಖರ ಕೊಂಕಣಾಜೆ, ರಾಮಮೂರ್ತಿ ಕುದ್ರೆಕೋಡ್ಲು ಹಿಮ್ಮೇಳ. ಮೊದಲೆರಡು ಸುತ್ತಿಗೆ ಉಜಿರೆ ಅಶೋಕ ಭಟ್‌, ಬಳಿಕ ವಾದಿರಾಜ ಕಲ್ಲೂರಾಯ ಮತ್ತು ಶ್ರೀಧರ ಡಿ.ಎಸ್‌. ಅವರ ನಿರೂಪಣೆ ಮತ್ತು ಕುಮಾರ ವಿಜಯ ಕೃತಿಶ್ರೇಷ್ಠತೆಯ ವಿಶ್ಲೇಷಣೆ. ಹೀಗಾಗಿ ಕಾವ್ಯವೊಂದನ್ನು ಗಾಯನದಲ್ಲಿ ಸವಿಯಲು ಬಂದ ಪ್ರೇಕ್ಷಕ ಸಂದೋಹಕ್ಕೆ ಇದು ಜ್ಞಾನಯಜ್ಞದ ಆರಾಧನೆಯೂ ಆಯಿತು. ತೆಂಕುತಿಟ್ಟಿನ ಕೆಲವು ಭಾಗವತರು ಇದರಲ್ಲಿ ಅವಕಾಶ ಪಡೆ ಯದೆ ಹೊರಗುಳಿದರೆಂಬ ಲೋಪ ಬಿಟ್ಟರೆ 22 ಮಂದಿಯನ್ನು ಒಂದೇ ಪ್ರಸಂಗದಲ್ಲಿ ಹಾಡಿಸಿದ ಕೀರ್ತಿ ಇದಕ್ಕಿದೆ.

ತೆಂಕು-ಬಡಗಣ ಯಕ್ಷಗಾನ ಇತಿಹಾಸದಲ್ಲೇ ಮೇರು ಕೃತಿಯೊಂದನ್ನು ಆಯ್ದು ಸಮಗ್ರ ಪದ್ಯಗಳ ಮೂಲಕ ಗಾನಾರ್ಚನೆಯ ಆರಾಧನೆ ನಡೆದಿರುವುದು ಇದೇ ಪ್ರಥಮ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಯಕ್ಷಗಾನ ಪದ್ಯಗಳನ್ನು ಆಸ್ವಾದಿಸುವ ಸಭ್ಯ ಪ್ರೇಕ್ಷಕರ ಸಂಖ್ಯೆ ಅತ್ಯಧಿಕ ಇತ್ತೆನ್ನುವುದೇ ಸಮೃದ್ಧತೆ, ಸಂಪನ್ನತೆಯ ದ್ಯೋತಕ. ಅಚ್ಚುಕಟ್ಟುತನ, ಶಿಸ್ತು, ಆತ್ಮೀಯ ಆತಿಥ್ಯ ಮುಂತಾದುವುಗಳಿಗೆಲ್ಲ ಹೆಸರಾದ ಪಾವಂಜೆಯ ಕಾರ್ಯಕ್ರಮವೆಂದರೆ ಈಗೀಗ ವಿಭಿನ್ನತೆ ಮತ್ತು ಕಾಳಜಿಯ ತುಡಿತವಷ್ಟೇ ಅಲ್ಲ, ಅದೊಂದು ಸಾಧನೆಯೂ ಆಗಿ ಸಮರ್ಪಣೆಯಾಗುತ್ತದೆ.





ಕೃಪೆ : udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ